ಕ್ಯಾನ್ಸೂ

ವಾಯವ್ಯ ಚೀನದ ಒಂದು ಪ್ರಾಂತ್ಯ. ವಿಸ್ತೀರ್ಣ 1,37,104 ಚ.ಮೈ.ಜನಸಂಖ್ಯೆ ಸು.1,30,00,000 (1968ರ ಅಂದಾಜು), ರಾಜಧಾನಿ ಲ್ಯಾಂಚೊ.

ಭೌಗೋಳಿಕವಾಗಿ ಕ್ಯಾನ್ಸೂ ಪ್ರಾಂತ್ಯ ಅತ್ಯಂತ ಜೀವಂತ ಭೂಕಂಪವಲಯದಲ್ಲಿದೆ. ಭೌತಿಕವಾಗಿ ಕ್ಯಾನ್ಸೂವನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಮರುಭೂಮಿ ಪ್ರದೇಶ 300 ಮೈ. ಅಗಲ 600 ಮೈ. ಉದ್ದವಾಗಿದೆ. ಇದು ಹಳದಿ ನದಿಯ ಪಶ್ಚಿಮದ ಕವಲಿನಿಂದ ಪ್ರಾರಂಭವಾಗಿ ಸಿಂಕಿಯಾಂಗ್ ಉಯಿಗರ್ ಸ್ವಯಮಾಡಳಿತ ಪ್ರದೇಶದ ವರೆಗೂ ಹಬ್ಬಿದೆ. ಇದು ಮಂಗೋಲಿಯನ್ ಮರುಭೂಮಿಯ ಕೆಲವು ಭಾಗಗಳನ್ನೊಳಗೊಂಡಿದೆ; ಗೋಬಿ ಮರುಭೂಮಿಯವರೆಗೂ ವ್ಯಾಪಿಸಿರುವ ಇದರ ಪಶ್ಚಿಮಾರ್ಧದೊಳಕ್ಕೆ ಎಟ್ಸಿನ್ ಗಾಲ್ ಮತ್ತು ಸು-ಲೊಹೊ ಅಥವಾ ಷುಲೆ ನದಿಗಳು ಹರಿದು ವಿಶಾಲವಾದ ಓಯಸಿಸುಗಳಿಗೆ ನೀರೊದಗಿಸುತ್ತವೆ. ಹಳದಿ ನದಿಯ ಪಶ್ಚಿಮದ ಕವಲಿನ ಪೂರ್ವಕ್ಕಿರುವುದು ಆಗ್ನೇಯ ಕ್ಯಾನ್ಸೂ. ಇದು ಎರಡನೆಯ ವಿಭಾಗ. ಹೊ-ಹ್ಸಿ ಅಥವಾ ಕ್ಯಾನ್ಸೂ ಭೂಪಟ್ಟೆ ಮೂರನೆಯ ವಿಭಾಗ. ಇಲ್ಲಿ, ಉತ್ತರ ಟಿಬೆಟಿನ ಪರ್ವತತಪ್ಪಲಿನಲ್ಲಿ, ಸಾಲಾಗಿ ಓಯಸಿಸ್‍ಗಳಿವೆ. ಪೂರ್ವ ಚೀನಕ್ಕೂ ಮಧ್ಯ ಏಷ್ಯಕ್ಕೂ ಸಂಪರ್ಕ ಕಲ್ಪಿಸುವ ಇತಿಹಾಸಪ್ರಸಿದ್ಧ ಮಾರ್ಗ ಸಾಗುವುದು ಇಲ್ಲೇ. ಮಂಗೋಲಿಯನ್ ಪ್ರಸ್ಥಭೂಮಿಗೂ ಹೊ-ಹ್ಸಿ ಭೂಪಟ್ಟೆಗೂ ನಡುವೆ 10,000' ವರೆಗೂ ಎತ್ತರವಾಗಿರುವ ಹೊ-ಲಿ, ಲುಂಗ್-ಷೌ ಮತ್ತು ಮಾ-ಟ್ಸೂಂಗ್ ಪರ್ವತಗಳುಂಟು. ದಕ್ಷಿಣದಲ್ಲಿ 18,000' ಎತ್ತರವಿರುವ ಚ್ಯಿ-ಲೀನ್ ಅಥವಾ ನಾನ್‍ಷಾನ್‍ಗೆ ಇವು ಸಮಾಂತರದಲ್ಲಿ ಹಬ್ಬಿವೆ. ಕ್ಯಾನ್ಸೂ ಭೂಪಟ್ಟೆಯನ್ನು ಪೂರ್ವ ಕ್ಯಾನ್ಸೂವಿನಿಂದ ಪ್ರತ್ಯೇಕಿಸುವ ಪರ್ವತ ವು-ಹ್ಸಿಯಾವೊ.

ಪೂರ್ವಭಾಗದಲ್ಲಿಯ ಮಾನ್ಸೂನ್ ಮಾದರಿಯಿಂದ ವಾಯುವ್ಯದಲ್ಲಿಯ ಖಂಡಾಂತರ ಮರುಭೂಮಿ ಮಾದರಿಯ ವರೆಗೆ ಇಲ್ಲಿಯ ವಾಯುಗುಣ ಕ್ರಮಕ್ರಮವಾಗಿ ವ್ಯತ್ಯಾಸವಾಗುತ್ತದೆ. ಪೂರ್ವ ಕ್ಯಾನ್ಸೂವಿನಲ್ಲಿ 20"-25" ಮಳೆ ಬೀಳುತ್ತದೆ. ಆದರೆ ಪಶ್ಚಿಮಕ್ಕೆ ಹೋದಂತೆ ಕಡಿಮೆಯಾಗಿ 4" ಗಿಂತ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ಎರಡು-ಮೂರು ದಿನಗಳ ಕಾಲ ಸತತವಾಗಿ ಮರಳಿನ ಬಿರುಗಾಳಿ ಬೀಸುವುದುಂಟು. ವಾಯವ್ಯದಲ್ಲಿ ಹೊಳೆಗಳು ಬಲು ವಿರಳ. ಅವು ಮರಳಿನಲ್ಲಿ ಇಂಗಿಹೋಗುತ್ತವೆ. ಇಲ್ಲವೇ ಉಪ್ಪು ನೀರಿನ ಸರೋವರಗಳನ್ನು ಸೇರುತ್ತವೆ. ಪೂರ್ವ ಕ್ಯಾನ್ಸೂವಿನಲ್ಲಿ ಕೂಡ ಚಳಿಗಾಲದಲ್ಲಿ ಹೊಳೆಗಳು ಬತ್ತಿಹೋಗಿರುತ್ತವೆ.

ಕ್ಯಾನ್ಸೂವಿನಲ್ಲಿಯ ವ್ಯವಸಾಯಕ್ರಮ ವ್ಯಾಪಕ ರೀತಿಯದು. ಗೋಧಿ ಮತ್ತು ಮೆಕ್ಕೆಜೋಳವನ್ನು ಬೆಳೆಯುತ್ತಾರೆ. ತಂಬಾಕು ಮತ್ತು ಹತ್ತಿ ಆರ್ಥಿಕ ಬೆಳೆಗಳು. 19ನೆಯ ಶತಮಾನದಲ್ಲಿ ಪದೇಪದೇ ಸಂಭವಿಸುತ್ತಿದ್ದ ದಂಗೆಗಳಿಂದ ಇಲ್ಲಿಯ ಬಹುತೇಕ ನೆಲ ಪಾಳು ಬಿದ್ದಿತ್ತು. ಈಗಿನ ಸರ್ಕಾರ ಅದನ್ನು ಅಭಿವೃದ್ಧಿಪಡಿಸುತ್ತಿದೆ. ಲಿಯು-ಚಿಯ ಕಮರಿಯ ಬಳಿಯಲ್ಲೂ ವು-ಚುಂಗ್‍ಗೆ ದಕ್ಷಿಣದಲ್ಲಿ ಟ್ಸಿಂಗ್‍ಟುಂಗ್ ಬಳಿಯಲ್ಲೂ ಹಳದಿ ನದಿಗೆ ಕಟ್ಟೆ ನಿರ್ಮಿಸುವ ಯೋಜನೆಗಳಿವೆ. ಪ್ರಾಂತ್ಯದ ಕೆಲವು ಭಾಗಗಳಲ್ಲಿ ಪಶುಪಾಲನೆ ಮುಖ್ಯ ಕಸುಬು.

ಕ್ಯಾನ್ಸೂವಿನಲ್ಲಿ ಅನೇಕ ಖನಿಜಗಳು ದೊರೆಯುತ್ತವೆ. ಲಾನ್-ಚೌ ದಕ್ಷಿಣ ಭಾಗದಲ್ಲಿ ಮತ್ತು ಹೊ-ಲಾನ್ ಷಾನ್‍ನ ಪೂರ್ವಭಾಗದ ಇಳಿಜಾರುಗಳಲ್ಲಿ ಕಲ್ಲಿದ್ದಲು ಸಿಗುತ್ತದೆ. ನಿಂಗ್ಸಿಯದ ಮರುಭೂಮಿ ಸರೋವರಗಳಲ್ಲಿ ಉಪ್ಪು ಮತ್ತು ಸೋಡ ದೊರೆಯುತ್ತವೆ. ನಾನ್ ಚಿ-ಲಿಯೆನ್ ಷಾನ್ ಬಳಿ ಕಬ್ಬಿಣದ ಅದುರಿನ ನಿಕ್ಷೇಪ ಸಿಕ್ಕಿದೆ. ಇದರಿಂದಾಗಿ ಲಾನ್-ಚೌನಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಬೆಳೆದಿದೆ. ಎಣ್ಣೆ ಇನ್ನೊಂದು ಮುಖ್ಯ ಖನಿಜಸಂಪತ್ತು. ಯು-ಮೆನ್‍ನ ಮತ್ತು ಚಿಯು-ಚುವಾನ್‍ನಲ್ಲಿ ಇದನ್ನು ಬೃಹದ್ ಪ್ರಮಾಣದಲ್ಲಿ ತೆಗೆದು ಲಾನ್-ಚೌಗೆ ಪರಿಷ್ಕರಣಕ್ಕಾಗಿ ತರಲಾಗುತ್ತದೆ.

ಹಳದಿ ನದಿ ಒಂದು ಹಳೆಯ ಸಂಚಾರಮಾಧ್ಯಮ. ಈ ನದಿಯ ಮೇಲೆ ತೆಪ್ಪಗಳಲ್ಲಿ ಸರಕುಗಳನ್ನು ಸಾಗಿಸುತ್ತಾರೆ. ಹಲವಾರು ಹೆದ್ದಾರಿಗಳು ವೇ ನದಿಯ ಕಣಿವೆಯ ಮೂಲಕ ಪ್ರಾಂತ್ಯವನ್ನು ಪ್ರವೇಶಿಸಿ ಹಳದಿ ನದಿಯ ಪಕ್ಕದಲ್ಲಿ ಸಾಗಿ, ಲಾನ್-ಚೌನಲ್ಲಿ ವಾಯವ್ಯ ಹೆದ್ದಾರಿಯನ್ನು ಸೇರುತ್ತವೆ. ಟಿಯೆನ್-ಷುಯಿಯಿಂದ ವಾಯವ್ಯಾಭಿಮುಖವಾಗಿ ಪೂರ್ವ ತುರ್ಕಿಸ್ತಾನಕ್ಕೆ ಸಾಗುವ ರೈಲುಮಾರ್ಗವೂ ಮುಖ್ಯವಾದ್ದು. ತೈಲ ಮತ್ತು ಇತರ ಖನಿಜಗಳ ಅಭಿವೃದ್ಧಿಯಿಂದಾಗಿಯೂ ರೈಲು ಮಾರ್ಗದಿಂದಾಗಿಯೂ ಕ್ಯಾನ್ಸೂವಿನ ಕೈಗಾರಿಕಾಭಿವೃದ್ಧಿಯಾಗಿದೆ. ಜವಳಿ, ವಿದ್ಯುತ್, ಮುದ್ರಣ ಅಮೃತಶಿಲೆ, ಆಹಾರ ಸಂಸ್ಕರಣ, ಗೊಬ್ಬರ, ಸಿಮೆಂಟ್, ಉಕ್ಕು ಮತ್ತು ಕಾಗದ ಕೈಗಾರಿಕೆಗಳು ಮುಖ್ಯವಾದುವು. ಕ್ಯಾನ್ಸೂವಿನ ಶೇ.90 ಮಂದಿ ಚೀನೀಯರು. ಉಳಿದವರು ವಾಯವ್ಯ ಭಾಗದಿಂದ ಬಂದ ಮಂಗೋಲಿಯನರು. ದಕ್ಷಿಣದಿಂದ ಬಂದ ಮುಸ್ಲಿಮರು ಮತ್ತು ಟಿಬೆಟಿಯನ್ನರು. 				(ಕೆ.ಎನ್.ಸಿ.)

ಕ್ರಿ,ಪೂ 4-3ನೆಯ ಸಹಸ್ರಮಾನಕ್ಕೆ ಸೇರಿದ ಪನ್-ಶನ್, ಮ-ಚಾಂಗ್ ಮುಂತಾದ ನವಶಿಲಾಯುಗ ಸಂಸ್ಕøತಿಗಳು ಇಲ್ಲಿ ಕಂಡುಬಂದಿವೆ. ಚರಿತ್ರಕಾರರ ದೃಷ್ಟಿಯಲ್ಲಿ ಈ ಸಂಸ್ಕøತಿಗಳೇ ಮುಂದೆ ಬೆಳೆದು ಚೀನದ ವಿಶಿಷ್ಟ ಸಂಸ್ಕøತಿಗೆ ಮೂಲವಾದುವು. ಅಲ್ಲದೆ ಈ ಕಾಲದಲ್ಲಾಗಲೇ ಇಲ್ಲಿಯ ನವಶಿಲಾಯುಗ ಸಂಸ್ಕøತಿಗಳಿಗೂ ಕಾಕೇಸಿಯ ಪ್ರದೇಶದ ಸಂಸ್ಕøತಿಗೂ ಸಂಪರ್ಕಗಳಿದ್ದುದು ಕಂಡುಬಂದಿದೆ. ಮುಂದೆ ಸಹ ಚೀನ ಮತ್ತು ಮಧ್ಯ ಏಷ್ಯದೊಡನೆ ಸಾಂಸ್ಕøತಿಕ ಸಂಪರ್ಕವನ್ನು ಬೆಳೆಸುವುದರಲ್ಲಿ ಕ್ಯಾನ್ಸೂ ಮುಖ್ಯ ಪಾತ್ರ ವಹಿಸಿತ್ತು. ಪ್ರಸಿದ್ಧ ರೇಷ್ಮೆಹಾದಿ ಇಲ್ಲಿಯ ಹೊ-ಹ್ಸಿ ಪ್ರದೇಶದ ಮೂಲಕ ಹಾದುಹೋಗುತ್ತದೆ. ಚೀನ ದೇಶದ ಮೇಲೆ ದಾಳಿ ನಡೆಸುತ್ತಿದ್ದ ಅನಾಗರಿಕ ಜನಾಂಗಗಳ ಮುನ್ನುಗ್ಗುವಿಕೆಯನ್ನು ತಡೆಯಲು ಕಟ್ಟಿದ ಬೃಹತ್ ಗೋಡೆಯ ಭಾಗ ಈ ಪ್ರಾಂತ್ಯದಲ್ಲೂ ಇದೆ. ಹೊರ ಜನರನ್ನು ತಡೆಯಲು ಅನೇಕ ಸೈನ್ಯಠಾಣೆಗಳು ಚೀನದ ಹ್ಯಾನ್ ಮತ್ತು ಟಾಂಗ್ ಅರಸು ಕುಲಗಳ ಆಳ್ವಿಕೆಯ ಕಾಲದಲ್ಲಿ ಇಲ್ಲಿ ಸ್ಥಾಪಿತವಾಗಿದ್ದುವು. ಆದರೂ ಚೀನ ದೇಶಕ್ಕೆ ಕ್ರೈಸ್ತ ಮತ್ತು ಬೌದ್ಧ ಧರ್ಮಗಳು ಹರಡಿದುದೂ ರೋಮ್ ಸಾಮ್ರಾಜ್ಯದೊಡನೆ ಇದರ ವ್ಯಾಪಾರ ಸಂಪರ್ಕಗಳೇರ್ಪಟ್ಟಿದ್ದೂ ಈ ಪ್ರದೇಶದ ಮೂಲಕ. ಇಲ್ಲಿ ಬೌದ್ಧ ಧರ್ಮ ಹರಡಿದ್ದುದರ ಕುರುಹಾಗಿ ಅನೇಕ ಭಿತ್ತಿಚಿತ್ರಗಳೂ ಶಿಲ್ಪಗಳೂ ಇಲ್ಲಿಯ ಹ್ವಾಂಗ್ ಗುಹೆಗಳಲ್ಲಿ ಉಳಿದುಬಂದಿವೆ. ಚೀನದ ಆಡಳಿತ ಶಕ್ತಿಗುಂದಿದಾಗ ತಾರ್ತರರ ಆಕ್ರಮಣ ನಡೆದದ್ದು ಇಲ್ಲಿಂದಲೇ. ಚೀನದ ಆಕ್ರಮಣಕ್ಕೆ ಇಲ್ಲಿಯ ಲಾಂಚೌ ಕೇಂದ್ರವಾಯಿತು. 				  (ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ